ವೆಬ್, ಜೋಸೈಯ
	1804-. ಮೈಸೂರು ಸಂಸ್ಥಾನದಲ್ಲಿದ್ದ ಬ್ರಿಟಿಷ್ ರೆಸಿಡೆಂಟ್ (1803-04). 1783ರಲ್ಲಿ ಮದರಾಸು ಫೋರ್ಟ್ ಸೇಂಟ್ ಜಾರ್ಜ್ ಕೋಟೆಯಲ್ಲಿ ಗುಮಾಸ್ತೆಯಾಗಿ ಈಸ್ಟ್ ಇಂಡಿಯ ಕಂಪನಿಯ ಸೇವೆಯಲ್ಲಿ ಸೇರಿದ ಇವನು, ತರುವಾಯ ಮಿಲಿಟರಿ ಇಲಾಖೆಯ ಕಾರ್ಯದರ್ಶಿಗೆ ಸಹಾಯಕ, ಡೆಪ್ಯುಟಿ ಕಮಿಸರಿ ಜನರಲ್ ಮತ್ತು ಮರಾಠಿ ಭಾಷಾಂತರಕಾರ (1786), ಲೋಕೋಪಯೋಗಿ ಮತ್ತು ರೆವಿನ್ಯೂ ಇಲಾಖೆಯ ಕಾರ್ಯದರ್ಶಿಗೆ ಸಹಾಯಕ (1787), ರೆವೆನ್ಯೂ ಬೋರ್ಡಿನ ಕಾರ್ಯದರ್ಶಿ (1790), ಆ ಮಂಡಲಿಯ ಸದಸ್ಯ (1790), ಸರ್ಕಾರದ ಕಾರ್ಯದರ್ಶಿ (1797), ಮದರಾಸು ಸರ್ಕಾರದ ಪ್ರಪ್ರಥಮ ಪ್ರಧಾನ ಕಾರ್ಯದರ್ಶಿ ಹಾಗೂ ಮರಾಠಿ ಭಾಷಾಂತರಕಾರ (ಜುಲೈ 1800) - ಈ ಹುದ್ದೆಗಳನ್ನು ನಿರ್ವಹಿಸಿ, 1803ರಲ್ಲಿ ಮೈಸೂರು ಸಂಸ್ಥಾನದ ರೆಸಿಡೆಂಟ್ ಆಗಿ ನೇಮಿತನಾದ. 1804ರಲ್ಲಿ ನಾಗಪುರ ಮತ್ತು ಗ್ವಾಲಿಯರ್‍ಗಳಲ್ಲಿ ರೆಸಿಡೆಂಟ್ ಆಗಿದ್ದ.

	ಮದರಾಸು ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ಟಿಪ್ಪುವಿನ ವಿರುದ್ಧ ಬ್ರಿಟಿಷರು ಯುದ್ಧವನ್ನು ಮುಂದುವರಿಸಬಾರದು ಎಂದು ಭಿನ್ನಾಭಿಪ್ರಾಯ ವರದಿಯನ್ನು ಕಳುಹಿಸಿದ್ದ. ಇದರಿಂದ ಲಾರ್ಡ್ ಮಾರ್ನಿಂಗ್‍ಟನ್ (ಮಾಕ್ರ್ವಿಸ್ ವೆಲ್ಲೆಸ್ಲಿ) ಹಾಗೂ ಲಂಡನ್ನಿನ ಈಸ್ಟ್ ಇಂಡಿಯ ಕಂಪನಿಯ ಡೈರೆಕ್ಟರುಗಳಿಗೆ ಇವನ ಬಗ್ಗೆ ಅಸಮಾಧಾನವಿತ್ತು. ಆದರೂ ದಕ್ಷ ನೌಕರನಾಗಿದ್ದ ಇವನನ್ನು ಇಂಗ್ಲೆಂಡಿಗೆ ವಾಪಸು ಕರೆಸಿ ಕೊಳ್ಳಬಾರದೆಂದು ಮಾರ್ನಿಂಗ್‍ಟನ್ ಡೈರೆಕ್ಟರುಗಳಿಗೆ ಬರೆದ. ಟಿಪ್ಪುವಿನ ಮೇಲೆ ಯುದ್ಧ ಹೂಡಿದಾಗ (1799 ಫೆಬ್ರವರಿ 14) ಈತ ಯುದ್ಧದ ಬಗ್ಗೆ ಮದರಾಸು ಕೇಂದ್ರದಿಂದ ಪೂರ್ಣವಾಗಿ ಸಹಕರಿಸಿ ಮಾನಿರ್ಂಗ್‍ಟನ್ನನ ವಿಶ್ವಾಸ ಗಳಿಸಿದ. 1799 ಮೇ 4ರಂದು ರಣರಂಗದಲ್ಲಿ ಟಿಪ್ಪು ಮಡಿದು, ಬ್ರಿಟಿಷರು ಶ್ರೀರಂಗಪಟ್ಟಣವನ್ನು ಆಕ್ರಮಿಸಿಕೊಂಡಾಗ, ಪ್ರಧಾನ ಕಾರ್ಯದರ್ಶಿಯಾಗಿದ್ದ ಈತ, ಗವರ್ನರ್ ಜನರಲ್ ಪರವಾಗಿ ಮೇ 4ನೆಯ ದಿನಾಂಕದ ಘಟನೆಗಳು ಗವರ್ನರ್ ಜನರಲ್ ಅವರ ನಿರೀಕ್ಷೆಗೂ ಮೀರಿದಂತೆ, ಪ್ರಪಂಚದ ಸೈನಿಕ ಇತಿಹಾಸದಲ್ಲೇ ಅತ್ಯಂತ ಅಮೋಘವೆ ನಿಸುವ ಘನತೆಗೌರವಗಳನ್ನು ಬ್ರಿಟಿಷ್ ಸೈನ್ಯಕ್ಕೆ ದೊರಕಿಸಿಕೊಟ್ಟಿವೆ, ಬ್ರಿಟಿಷರು ಇಂಡಿಯ ದೇಶದಲ್ಲಿ ಸಂಪಾದಿಸಿಕೊಂಡಿರುವ ರಾಜ್ಯಗಳಲ್ಲಿ ಶಾಂತಿಸ್ಥಾಪನೆ ಮತ್ತು ಶಿಸ್ತುಪಾಲನೆ ಈ ವಿಜಯದಿಂದ ಸಾಧ್ಯ, ತನ್ನ ಶತ್ರುಗಳ ದುಷ್ಟ ಯೋಚನೆಗಳೇ ಇಂಗ್ಲೆಂಡಿನ ಏಳಿಗೆ, ಖ್ಯಾತಿ ಮತ್ತು ಬಲವನ್ನು ಹೆಚ್ಚಿಸಿವೆ ಎಂದು ಮದರಾಸಿನಿಂದ ಸರ್ಕಾರಿ ಸಂದೇಶವನ್ನು ಹೊರಡಿಸಿದ (1799 ಮೇ 15).

	ಇವನ ಮತ್ತು ದಿವಾನ್ ಪೂರ್ಣಯ್ಯನವರ ನಡುವೆ ಗಾಢ ಸ್ನೇಹವಿತ್ತು. ಈತನ ಆದರ್ಶ ವ್ಯಕ್ತಿತ್ವದ ಸ್ಮರಣೆಗಾಗಿ ಪೂರ್ಣಯ್ಯನವರು ಶ್ರೀರಂಗಪಟ್ಟಣದ ಸಮೀಪದ ಫ್ರೆಂಚ್‍ರಾಕ್ಸ್ (ಪಾಂಡವಪುರ) ಬಳಿ ನಿಲುಗಂಬವನ್ನು (ವೆಬ್ ಮಾನ್ಯುಮೆಂಟ್) ನಿಲ್ಲಿಸಿದರು (ಅದನ್ನು ಸ್ಥಳೀಯರು ರಣಕಂಬವೆಂದು ತಪ್ಪಾಗಿ ಕರೆಯುತ್ತಾರೆ). ಈತ ತನ್ನ ಜೀವಿತವನ್ನೆಲ್ಲ ಈಸ್ಟ್ ಇಂಡಿಯ ಕಂಪನಿಯ ಸೇವೆಯಲ್ಲಿ ಕಳೆದ. ತಾನು ರೆಸಿಡೆಂಟನಾಗಿದ್ದ ಸಂಸ್ಥಾನಗಳ ಅರಸರ ಮತ್ತು ಪ್ರಜೆಗಳ ಗೌರವವನ್ನು ಸಂಪಾದಿಸಿದ್ದ. ಈತನ ಸ್ಮರಣೆಗಾಗಿ ಮದರಾಸಿನ ಫೋರ್ಟ್ ಸೇಂಟ್ ಜಾರ್ಜ್ ಕೋಟೆಯ ಸೇಂಟ್ ಮೇರಿ ಚರ್ಚಿನಲ್ಲಿ ಸ್ಮಾರಕವನ್ನು ಕಟ್ಟಿಸಲಾಯಿತು. ಕರ್ನಲ್ ಆರ್ಥರ್ ವೆಲ್ಲೆಸ್ಲಿ (ಡ್ಯೂಕ್ ಆಫ್ ವೆಲ್ಲಿಂಗ್‍ಟನ್) ಇವನನ್ನು ತನ್ನ ಆಪ್ತಸ್ನೇಹಿತನೆಂದು ಪರಿಗಣಿಸಿದ್ದ. ವೆಲ್ಲೆಸ್ಲಿಯ ಅಭಿಪ್ರಾಯದಲ್ಲಿ ಇವನು ಸತ್ಯವಂತ ಹಾಗೂ ದಕ್ಷ ಅಧಿಕಾರಿ. ಈತ 1804 ನವೆಂಬರ್ 9ರಂದು ಮಧ್ಯಪ್ರದೇಶದ ಹೋಷಂಗಾಬಾದಿನಲ್ಲಿ ನಿಧನನಾದ.	
												(ವಿ.ಜಿ.ಕೆ.)

   *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ